ಕೃಷ್ಣವರ್ಮ 2 

ಕದಂಬ ರಾಜ ಸಿಂಹವರ್ಮನ ಮಗ ಮತ್ತು ಕದಂಬ ಮನೆತನದ ಉಪಶಾಖೆಯ ನಾಲ್ಕನೆಯ ದೊರೆ. ಅತ್ಯಂತ ಸಮರ್ಥ. ಅಳ್ವಿಕೆಯ ಕಾಲ 516-540. ಎರಡು ಕದಂಬ ರಾಜ್ಯಗಳನ್ನೂ ಮತ್ತೆ ಒಂದುಗೂಡಿಸಿದ ಕೀರ್ತಿ ಇವನದು. ಇವನು ನಾಗಪುರವನ್ನು ಗೆದ್ದು ಪಟ್ಟವೇರಿದನೆಂದು ಶಾಸನಗಳಿಂದ ತಿಳಿದುಬರುತ್ತದೆ. ಕದಂಬ ಸಂತತಿಯ ಮತ್ತೊಂದು ಶಾಖೆಯ ದೊರೆಯಾಗಿದ್ದ ಹರಿವರ್ಮನನ್ನು ಸೋಲಿಸಿ ಅವನ ರಾಜಧಾನಿಯಾಗಿದ್ದ ಬನವಾಸಿ ಅಥವಾ ವೈಜಯಂತಿಯಲ್ಲಿ ಈತ ನೆಲಸಿದನೆಂದು ತಿಳಿದು ಬರುತ್ತದೆ. ಈತ ಅಶ್ವಮೇಧಯಾಗವನ್ನು ಆಚರಿಸಿದ. ಚಾಳುಕ್ಯ ಸಂತತಿಯ 1ನೆಯ ಪುಲಿಕೇಶಿ ಕೃಷ್ಣವರ್ಮನ ಸಾಮಂತನಾಗಿದ್ದ. ಅನಂತರ ಅವನನ್ನು ಸೋಲಿಸಿ ಸ್ವತಂತ್ರನಾಗಿ ಬಾದಾಮಿಯನ್ನು ರಾಜಧಾನಿಯಾಗಿ ಮಾಡಿಕೊಂಡ-ಅನಂತರ ಕದಂಬ ಸಂತತಿ ಕ್ಷೀಣಗೊಂಡಿತು. ಕೃಷ್ಣವರ್ಮನ ಮರಣಾನಂತರ (540) ಅವನ ಮಕ್ಕಳಾದ ಅಜವರ್ಮ ಮತ್ತು ರವಿವರ್ಮರೂ ಅಜವರ್ಮನ ಮಗ ಭೋಗಿವರ್ಮನೂ ಅನುಕ್ರಮವಾಗಿ ಅಧಿಕಾರಕ್ಕೆ ಬಂದರಾದರೂ ಅವರು ಸ್ವತಂತ್ರರಾಗಿ ಆಳಲಿಲ್ಲ.  

   (ಎಂ.ವಿ.ಎಸ್.ಆರ್.; ಎಂ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ